ರೂಸ್‍ವೆಲ್ಟ್, ಫ್ರಾಂಕ್ಲಿನ್ ಡಿಲಾನೊ
1882-1945. ಅಮೆರಿಕದ 32ನೆಯ ಅಧ್ಯಕ್ಷ. ಇವನು ನ್ಯೂಯಾರ್ಕಿನ ಹೈಡ್ ಪಾರ್ಕಿನಲ್ಲಿ 1882 ಜನವರಿ 30ರಂದು ಜನಿಸಿದ. ಜೇಮ್ಸ್ ರೂಸ್‍ವೆಲ್ಟ್ ಹಾಗೂ ಸಾರಾ ರೂಸ್‍ವೆಲ್ಟ್‍ರ ಏಕಮಾತ್ರಪುತ್ರ.  ಇವನು ಹಾರ್ವರ್ಡ್ ವಿಶ್ವವಿದ್ಯಾಲಯ ಹಾಗೂ ಕೊಲಂಬಿಯದ ಕಾನೂನು ಶಾಲೆಯಲ್ಲಿ ಅಭ್ಯಾಸಮಾಡಿ ಕಾನೂನು ಪದವಿಪಡೆದ(1907). ಇವನು ತನ್ನ 23ನೆಯ ವಯಸ್ಸಿನಲ್ಲಿ ಎಲೀನಾರಳೊಂದಿಗೆ ವಿವಾಹವಾದ (1905 ಮಾರ್ಚ್ 7). ಇವನು ಸತತವಾಗಿ ನಾಲ್ಕು ಬಾರಿ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಗೊಂಡ ಏಕೈಕ ವ್ಯಕ್ತಿ(1933-45).

ಅಮೆರಿಕದ ಮತ್ತೋರ್ವ ಪ್ರಸಿದ್ಧ ಅಧ್ಯಕ್ಷ ಥಿಯೋಡೋರ್ ರೂಸ್ ವೆಲ್ಟ್‍ರ ದೂರದ ಸಂಬಂಧಿಯಾದ ಇವನು ಥಿಯೋಡೋರ್‍ನನ್ನು ಅಪಾರವಾಗಿ ಮೆಚ್ಚಿಕೊಂಡಿದ್ದ. ಮೂಲತಃ ಡೆಮಾಕ್ರಾಟ್ ಆಗಿದ್ದ ಇವನು 1910ರಲ್ಲಿ ನ್ಯೂಯಾರ್ಕಿನ ಸೆನೆಟ್‍ಗೆ ಆಯ್ಕೆಯಾದ. ಅನಂತರ ವುಡ್ರೋ ವಿಲ್ಸನ್ ಇವನನ್ನು ನೌಕಾದಳದ ಸಹಾಯಕ ಕಾರ್ಯದರ್ಶಿಯಾಗಿ ನೇಮಿಸಿದ (1913). 1920ರಲ್ಲಿ ಅಮೆರಿಕದ ಉಪಾಧ್ಯಕ್ಷ ಪದವಿಗೆ ಡೆಮಾಕ್ರಾಟಿಕ್ ಪಕ್ಷದಿಂದ ಇವನ ಹೆಸರು ಸೂಚಿಸಲ್ಪಟ್ಟಿತ್ತಾದರೂ ದುರದೃಷ್ಟವಶಾತ್ ಇವನು ಪೋಲಿಯೋ ಕಾಯಿಲೆಯಿಂದ ಕಾಲಿನ ಶಕ್ತಿ ಕಳೆದುಕೊಂಡ (1921). ಆದರೆ ಇವನು ಅತ್ಯಂತ ಧೈರ್ಯ ಹಾಗೂ ದೃಢಸಂಕಲ್ಪದಿಂದ ತನ್ನ ಸಂಕಷ್ಟದ ಪರಿಸ್ಥಿತಿ ಎದುರಿಸುವ ನಿರ್ಧಾರ ಮಾಡಿ ನಿರಂತರ ಈಜುವಿಕೆಯ ಮೂಲಕ ಕಳೆದು ಹೋಗಿದ್ದ ತನ್ನ ಕಾಲಿನ ಶಕ್ತಿಯನ್ನು ನಿಧಾನವಾಗಿ ಗಳಿಸಿಕೊಂಡ. ಅನಂತರ ಇವನು 1928ರಲ್ಲಿ ನ್ಯೂಯಾರ್ಕಿನ ರಾಜ್ಯಪಾಲನಾಗಿ ಚುನಾಯಿತನಾದ. 1932ರಲ್ಲಿ ಮೊದಲ ಬಾರಿಗೆ ಅಮೆರಿಕಾದ ಅಧ್ಯಕ್ಷನಾಗಿ ಡೆಮಾಕ್ರೆಟಿಕ್ ಪಕ್ಷದಿಂದ ಆಯ್ಕೆಯಾದ.

ಇವನು ಅಮೆರಿಕದ ಅಧ್ಯಕ್ಷನಾದಾಗ ದೇಶ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ಅಧ್ಯಕ್ಷ ಪದವಿಯನ್ನು ಅಲಂಕರಿಸಿ ಉದ್ಘಾಟನಾ ಭಾಷಣ ಮಾಡಿದ ಸಂದರ್ಭದಲ್ಲಿ ಇವನು ದೃಢವಾಗಿ ಹೀಗೆ ಹೇಳಿದ: “ಎಂದಿನಂತೆ ಮುಂದೆಯೂ ಅಮೆರಿಕಾ ಪುನರುತ್ಥಾನ ಗೊಂಡು ಅಭಿವೃದ್ಧಿ ಹೊಂದುತ್ತದೆ. ಮತ್ತೆ ಮತ್ತೆ ನಾನು ಹೇಳುವುದೇ ನೆಂದರೆ ನಾವು ಭಯಪಡಬೇಕಾದದ್ದು ಕೇವಲ ಭಯಕ್ಕೆ ಮಾತ್ರ (ದ ಓನ್ಲಿ ಥಿಂಗ್ ವೀ ಹ್ಯಾಮ್ ಟು ಫೀಯರ್ ಇಸ್ ಫೀಯರ್ ಇಟ್‍ಸೆಲ್ಫ್). ಇವನು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಬ್ಯಾಂಕುಗಳು ದಿವಾಳಿಯಾಗಿ ಮುಚ್ಚಿಹೋಗುವ ಪರಿಸ್ಥಿತಿಯಲ್ಲಿದ್ದವು. ಎಲ್ಲೆಲ್ಲೂ ನಿರುದ್ಯೋಗ ತುಂಬಿತುಳುಕುತ್ತಿತ್ತು. ವಾಣಿಜ್ಯ ಮತ್ತು ಕೃಷಿ ಅತ್ಯಂತ ಸಂಕಷ್ಟದಲ್ಲಿದ್ದಾಗ ಇವನು ನೂರು ದಿನಗಳ ಕಾರ್ಯಕ್ರಮ ಅನುಷ್ಠಾನಗೊಳಿಸಿದ (1933 ಮಾರ್ಚ್ 9). ತುರ್ತು ಬ್ಯಾಂಕ್ ಮಸೂದೆಯನ್ನು ಜಾರಿಗೆ ತಂದ ಕೇವಲ ಒಂದು ವಾರದೊಳಗೆ ಬ್ಯಾಂಕಿನ ಚಟುವಟಿಕೆಗಳು ಯಥಾಸ್ಥಿತಿ ಯಲ್ಲಿ ಮುಂದುವರೆದವು. `ನ್ಯಾಷನಲ್ ಇಂಡಸ್ಟ್ರಿಯಲ್ ರಿಕವರಿ ಆಕ್ಟ್ (ಎನ್‍ಐಆರ್‍ಎ) `ಅಗ್ರಿಕಲ್ಚರಲ್ ಅಡ್ಜಸ್ಟ್‍ಮೆಂಟ್ ಅಡ್ಮಿನಿಸ್ಟ್ರೇಷನ್ ಆಕ್ಟ್ (ಎಎಎಎ) ಮುಂತಾದ ಕಾಯಿದೆಗಳ ಮೂಲಕ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಿದ್ದ. ಇವನು ಜಾರಿ ಗೊಳಿಸಿದ ಯೋಜನೆಗಳಿಗೆ ಅನೇಕ ವಿರೋಧಗಳು ಎದುರಾದವು. ಇವನು 1935ರಲ್ಲಿ ಹೊಸನೀತಿ (ನ್ಯೂ ಡೀಲ್) ಎಂಬ ಯೋಜನೆಯನ್ನು ಜಾರಿಗೊಳಿಸಿದ. ಟೆನೆನ್ಸಿ ಕಣಿವೆ ಪ್ರಾಧಿಕಾರದ ಮೂಲಕ ಆರ್ಥಿಕ ಪ್ರಗತಿ ಸಾಧಿಸಲು ಅಣೆಕಟ್ಟೆಗಳ ನಿರ್ಮಾಣ, ವಿದ್ಯುಚ್ಛಕ್ತಿಯ ಉತ್ಪಾದನೆ ಇತ್ಯಾದಿ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ದೇಶ ದಲ್ಲಿ ಮೊದಲಬಾರಿಗೆ ನಿರು ದ್ಯೋಗಿಗಳಿಗೆ ಪರಿಹಾರ ಭತ್ಯೆ, ಸಾಮಾಜಿಕ ಭದ್ರತೆ, ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದು ಮುಂ ತಾದ ಯೋಜನೆಗಳ ಮೂಲ ಕ ದೇಶದ ಸರ್ವಾಂಗೀಣ ಪ್ರಗತಿ ಸಾಧಿಸಲಾಯಿತು. `ಪರಿಹಾರ, ಪುನರುದ್ಧಾರ, ಸುಧಾರಣೆ-ಇವು ಹೊಸ ನೀತಿಯ ಪ್ರಮುಖ ತತ್ವಗಳು. ಈ ನೀತಿಯ ಧ್ಯೇಯೋದ್ದೇಶ ಗಳ ಬಗ್ಗೆ ಜನ ಸಾಮಾನ್ಯ ರಿಗೆ ಅರಿವು ಮೂಡಿಸಲು ಆಡು ಭಾಷೆಯಲ್ಲಿ ಬಾನುಲಿ ಮೂಲಕ ಬಿತ್ತರಿಸುವ ವ್ಯವಸ್ಥೆಕೈಗೊಂಡ. ಹೊಸ ಸುಧಾರಣಾ ನೀತಿಗೆ ಅಪಾರ ವಿರೋಧ ಬಂದಿತ್ತಾದರೂ 1936ರಲ್ಲಿ ಸರ್ಕಾರಕ್ಕೆ ಆರ್ಥಿಕ ಪರಿಸ್ಥಿತಿಯನ್ನು ನಿಯಂತ್ರಿಸುವ ಅಧಿಕಾರ ದೊರೆತಿದ್ದರಿಂದ ಹೊಸನೀತಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು.

ಇವನು ಅಮೆರಿಕ ದೇಶಕ್ಕೆ ಪೂರಕವಾಗುವ ವಿದೇಶಾಂಗ ನೀತಿಯನ್ನು ಅನುಸರಿಸಿದ. ಆರಂಭದಲ್ಲಿ ಯುರೋಪಿನೊಂದಿಗೆ ತಟಸ್ಥ ನೀತಿ ಅನುಸರಿ ಸಿದರೂ 1939ರಲ್ಲಿ ಆರಂಭವಾದ ಎರಡನೆಯ ಮಹಾಯುದ್ಧದಲ್ಲಿ ಸಡಲಿಸಬೇಕಾಯಿತು. ಯುದ್ಧ ಆರಂಭವಾದಂತೆ ಅಮೆರಿಕದಲ್ಲಿ ಸೈನ್ಯ ಸಿದ್ಧತೆ ಹೆಚ್ಚಿಸಿಕೊಂಡು ಇಂಗ್ಲೆಂಡಿಗೆ ಸಹಾಯಹಸ್ತವನ್ನೂ ನೀಡಿದ. ಜರ್ಮನಿಯ ಯುದ್ಧನೌಕೆಗಳು ಅಮೆರಿಕದ ವಾಣಿಜ್ಯನೌಕೆಗಳನ್ನು ನಾಶಪಡಿಸಲು ಆರಂಭಿಸಿದಾಗ ಇವನು ಹಡಗಿನಲ್ಲಿ ಅಟ್ಲಾಂಟಿಕ್ ಸಾಗರವನ್ನು ತಲುಪಿ ಇಂಗ್ಲೆಂಡಿನ ಪ್ರಧಾನಿ ಚರ್ಚಿಲ್‍ನನ್ನು ಭೇಟಿಮಾಡಿ ಅಟ್ಲಾಂಟಿಕ್ ಚಾರ್ಟರ್‍ಅನ್ನು ರಚಿಸಿದ. ಅಟ್ಲಾಂಟಿಕ್ ಚಾರ್ಟರ್‍ನ ಪ್ರಮುಖತತ್ತ್ವಗಳು ಎಲ್ಲಾ ಜನಾಂಗಗಳಿಗೂ ಸ್ವಾಯತ್ತತೆ, ನಿರ್ಬಂಧ ವಿಲ್ಲದ ಮುಕ್ತ ವ್ಯಾಪಾರಕ್ಕೆ ಅವಕಾಶ, ಯುದ್ಧ ಭೀತಿಯಿಂದ ಮುಕ್ತಿ, ಯುದ್ಧದ ಪರಿತ್ಯಾಗ. ಈ ತತ್ತ್ವಗಳೆ ಮುಂದೆ ವಿಶ್ವಸಂಸ್ಥೆಯ ಸ್ಥಾಪನೆಗೆ ಬುನಾದಿಯಾದುವು.

1941 ಡಿಸೆಂಬರ್ 8ರಂದು ಜಪಾನೀಯರು ಅಮೆರಿಕಕ್ಕೆ ಸೇರಿದ ಪರ್ಲ್ ಹಾರ್ಬರ್‍ನ ಮೇಲೆ ಆಕ್ರಮಣ ಮಾಡಿದಾಗ ಅಮೆರಿಕ ಎರಡನೆಯ ಮಹಾಯುದ್ಧ ಪ್ರವೇಶಿಸಿತು. 1944ರಲ್ಲಿ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕನೆಯ ಬಾರಿ ಅಧ್ಯಕ್ಷನಾಗಿ ಇವನು ಪುನರ್ ಆಯ್ಕೆಯಾದ. ಹೊಸ ಆರ್ಥಿಕ ನೀತಿಯ ಮೂಲಕ ಅಮೆರಿಕ ಸಂಯುಕ್ತ ಸಂಸ್ಥಾನ ಆರ್ಥಿಕವಾಗಿ ಸುಧಾರಣೆ ಗೊಂಡಿತಲ್ಲದೆ, ಇಡೀ ಪ್ರಪಂಚದಲ್ಲಿಯೇ ಅಮೆರಿಕ ಬೃಹತ್ ಶಕ್ತಿಯಾಗಿ ರೂಪುಗೊಳ್ಳುವುದಕ್ಕೆ ಇವನೇ ಕಾರಣಕರ್ತನಾದ. ಎರಡನೆಯ ಮಹಾಯುದ್ಧದಲ್ಲಿ ಹಿಟ್ಲರನ ಸೋಲಿಗೆ ಇವನು ಸೇರಿ ರಚಿಸಿದ ಮಿತ್ರರಾಷ್ಟ್ರಗಳ ಒಕ್ಕೂಟವೇ ಪ್ರಮುಖ ಕಾರಣವಾಗಿ ಪರಿಣಮಿಸಿತು. ಅಟ್ಲಾಂಟಿಕ್ ಚಾರ್ಟರ್ ಮೂಲಕ ವಿಶ್ವಸಂಸ್ಥೆ ಸ್ಥಾಪನೆಗೆ ಅಡಿಗಲ್ಲು ಹಾಕಿದ. ಇಪ್ಪತ್ತನೆಯ ಶತಮಾನದ ಪ್ರಪಂಚಚರಿತ್ರೆಗೆ ತಿರುವು ನೀಡಿದ ಇವನು 1945 ಏಪ್ರಿಲ್ 12ರಂದು ನಿಧನಹೊಂದಿದ.	
(ಐ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ